ಸೀಮಂತ - 
	ಗಂಡನ ಮನೆಯಿಂದ ತವರು ಮನೆಗೆ ಕಳುಹಿಸುವಾಗ ಚೊಚ್ಚಲು ಬಸುರಿ ಸೊಸೆಗೆ ನಡೆಸುವ ಒಂದು ಶಾಸ್ತ್ರ. ಜನಪದರಲ್ಲಿ ಇದನ್ನು ಬಸಿರೊಸಗೆ ಎಂದು ಕರೆಯಲಾಗುತ್ತದೆ. ಗರ್ಭಧಾರಣೆಯಾದ ಐದನೆಯ ಅಥವಾ ಏಳನೆಯ ತಿಂಗಳಿನಲ್ಲಿ ನಡೆಯುವ ಈ ಆಚರಣೆಯ ಸಂದರ್ಭದಲ್ಲಿ ಬಂಧುಗಳನ್ನೂ ನೆರೆಹೊರೆಯವರನ್ನೂ ಆಹ್ವಾನಿಸಿ, ಕರೆದೊಯ್ಯಲು ಬಂದಿರುವ ಬೀಗರ ಸಮ್ಮುಖದಲ್ಲಿ ಹೊಸ ಹಸುರು ಸೀರೆ, ರವಿಕೆ, ಬಳೆಗಳಿಂದ ಅಲಂಕೃತಗೊಂಡ ಗರ್ಭಿಣಿಯನ್ನು ಹಸೆಮಣೆಯ ಮೇಲೆ ಕುಳ್ಳಿರಿಸುತ್ತಾರೆ. ಆಕೆಯ ಮುಂದೆ ಬೆಲ್ಲ, ಅಕ್ಕಿ, ಬಾಳೆಹಣ್ಣಿನ ಚಿಪ್ಪು, ಒಣಕೊಬ್ಬರಿ, ಅರಿಶಿನದ ಕೊನೆ, ಸೀಗೆಕಾಯಿ, ಎಲೆಅಡಕೆ ಇವನ್ನೆಲ್ಲ ಐದು ತಣಿಗೆಗಳಲ್ಲಿ ಇಡುತ್ತಾರೆ. ಐದು ಜನ ಮುತ್ತೈದೆಯರು ಸೋಗಲು ಹುಯ್ಯುತ್ತಾರೆ. ಊಟೋಪಚಾರಗಳೆಲ್ಲ ಮುಗಿದ ಮೇಲೆ ಮಾಡಿಟ್ಟಿರುವ ತಿಂಡಿ ತಿನಿಸುಗಳಿಂದ ಬುಟ್ಟಿ ತುಂಬಿ ಕಳುಹಿಸಿಕೊಡುತ್ತಾರೆ. ಈ ಸಂದರ್ಭದಲ್ಲಿ ಒಂದು ನಿಷೇಧವಿದೆ : ಬಸುರಿ ಹೆಣ್ಣುಮಗಳನ್ನು ಕರೆದೊಯ್ಯಲು ಬರುವ ತವರಿನವರ ಜೊತೆ ಆಕೆಯ ಸೋದರರ್ಯಾರೂ ಬರುವಂತಿಲ್ಲ. ಈ ನಿಷೇಧದ ಹಿನ್ನೆಲೆಯಲ್ಲಿ ಮಹಾಭಾರತದ ಕಥಾಸಂದರ್ಭವೊಂದು ಇದೆ. ಗರ್ಭಿಣಿ ಸುಭದ್ರೆಯನ್ನು ಅಣ್ಣ ಶ್ರೀಕೃಷ್ಣ ರಥದಲ್ಲಿ ಕರೆದೊಯ್ಯುವಾಗ ಕೃಷ್ಣನ ಮಾತುಗಳನ್ನು ಸುಭದ್ರೆ ಹ್ಞೂಗುಟ್ಟುತ್ತ ಕೇಳಿಸಿಕೊಳ್ಳುತ್ತಿದ್ದಳು. ಕೃಷ್ಣ ಚಕ್ರವ್ಯೂಹದ ಬಗ್ಗೆ ಹೇಳತೊಡಗಿದ. ಚಕ್ರವ್ಯೂಹದೊಳಗೆ ನುಗ್ಗುವ ರೀತಿಯನ್ನು ಹೇಳಿ ನಿಲ್ಲಿಸಿ ಕೃಷ್ಣ ಹಿಂತಿರುಗಿ ನೋಡಿದಾಗ ಸುಭದ್ರೆ ನಿದ್ರೆಹೋಗಿದ್ದಳು. ಗರ್ಭದಲ್ಲಿದ್ದ ಅಭಿಮನ್ಯು ಅಷ್ಟು ಹೊತ್ತೂ ಹ್ಞೂಗುಟ್ಟಿದ್ದಾನೆ ಎಂದರಿತ ಕೃಷ್ಣ ತನ್ನ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದ. ಗರ್ಭಸ್ಥ ಅಭಿಮನ್ಯು ಚಕ್ರವ್ಯೂಹದೊಳಗೆ ನುಗ್ಗುವುದನ್ನು ಮಾತ್ರ ಕೇಳಿಸಿಕೊಂಡಿದ್ದ. ಹೊರಬರುವ ರೀತಿ ಅವನಿಗೆ ಕೇಳಿಸದೇ ಹೋದದ್ದರಿಂದ ಮುಂದೆ ಯುದ್ಧದಲ್ಲಿ ಸಾವಿಗೆ ಶರಣಾಗಬೇಕಾಯಿತು. ಈ ಕಥೆಯ ಪ್ರಭಾವದಿಂದ ಬಸಿರೊಸಗೆಯಂದು ಅಲ್ಲಿಗೆ ಅಣ್ಣನಾಗಲಿ, ತಮ್ಮನಾಗಲಿ ಬರುವುದು ನಿಷೇಧಿಸಲ್ಪಟ್ಟಿತು ಎಂಬ ಅಂಶ ಜನಪದ ಮೂಲದಿಂದ ತಿಳಿದುಬರುತ್ತದೆ. 

	ಸೀಮಂತವನ್ನು ಆರ್ಷೇಯ ಮೂಲ ಹೀಗೆ ವರ್ಣಿಸುತ್ತದೆ : ಗರ್ಭಿಣಿಯ ತಲೆಕೂದಲನ್ನು ಬೈತಲೆಯಿಂದ ವಿಭಾಗಿಸಿ ಅಲಂಕರಿಸುವ ಶಾಸ್ತ್ರಕ್ಕೆ ಸೀಮಂತ ಎಂದು ಹೆಸರು. ಗರ್ಭಧರಿಸಿದ ನಾಲ್ಕನೆಯ ಮಾಸದಲ್ಲಿ, ಶುಕ್ಲಪಕ್ಷದಲ್ಲಿ, ಪುರುಷ ನಕ್ಷತ್ರದಲ್ಲಿ ಅಗ್ನಿಯನ್ನು ಸ್ಥಾಪಿಸಿ, ವೃಷಭಾಜಿನವನ್ನು ಪೂರ್ವ ದಿಕ್ಕಿಗೆ ತಲೆ ಇರುವಂತೆ ಹಾಸಿ, ಎಂಟು ಆಜ್ಯವನ್ನು ಅರ್ಪಿಸಿ, ಪತ್ನಿಯನ್ನು ಅದರ ಮೇಲೆ ಕುಳ್ಳಿರಿಸಿ, ಪ್ರಜಾಪತಿಯನ್ನು ಸಂಬೋಧಿಸಿ ಮಂತ್ರವನ್ನು ಹೇಳಿ, ಮೂರು ಬಿಳಿಯ ಚುಕ್ಕೆ ಇರುವ ಮುಳ್ಳುಹಂದಿಯ ಮುಳ್ಳಿನಿಂದಲೂ ದರ್ಭೆಯಿಂದಲೂ ಆಕೆಯ ಕೇಶವನ್ನು ಪತಿಯು ನಾಲ್ಕು ಸಲ ಮೇಲಕ್ಕೆ ಬಾಚುವನು. ವಾದ್ಯಗಾರರು ಸೋಮದೇವನನ್ನು ಸ್ತುತಿಸುವರು. ಹೋಮ ಮಂತ್ರ ಹವಿಸ್ಸನ್ನು ಅರ್ಪಿಸುವರು. ಇದು ಅಶ್ವಲಾಯನ ಸೂತ್ರದ ವರ್ಣನೆ. 
												(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ